ಗಂಡ ಸತ್ತ ಬಳಿಕ ತಾವು ‘ಮುತ್ತು’ ಆಗಿ ಬದಲಾಗುವ ಮಾರ್ಗವೊಂದೇ ಉಳಿದಿತ್ತು ಎಂದು ಪೆಚಿಯಮ್ಮಾಳ್ ಹೇಳಿಕೊಂಡಿದ್ದಾರೆ. ಆದರೆ ತಮ್ಮ ಹಾಗೂ ಮಗುವಿನ ಜೀವನದ ಬಗ್ಗೆ ದೃಢಸಂಕಲ್ಪ ಹೊಂದಿದ್ದ ಅವರು, ನಿರ್ಮಾಣ ಸ್ಥಳಗಳು, ಹೋಟೆಲ್, ಟೀ ಅಂಗಡಿ ಮುಂತಾದ ಕಡೆಗಳಲ್ಲಿ ಕೆಲಸ ಮಾಡಿದರು. ಆದರೆ ಅಲ್ಲಿ ಸಿಗುವ ಹಣದಿಂದ ಮಗುವನ್ನು ಬೆಳೆಸುವುದು ಬಹಳ ಕಷ್ಟಕರವಾಗಿತ್ತು. ತಾವು ಕೆಲಸ ಮಾಡಿದ ಕಡೆಯಲ್ಲೆಲ್ಲ ಕಿರುಕುಳ, ಲೈಂಗಿಕ ಹಿಂಸೆ ಮತ್ತು ಇತರೆ ಅನೇಕ ತೊಂದರೆಗಳನ್ನು ಅನುಭವಿಸುವಂತಾಗಿತ್ತು.
ಈ ಸಂಕಷ್ಟಗಳಿಂದ ಮುಕ್ತಿ ಪಡೆಯಲು ಅವರು ನಿರ್ಧರಿಸಿದ್ದರು. ತಿರುಚೆಂಡೂರ್ ಮುರುಗನ್ ದೇವಸ್ಥಾನಕ್ಕೆ ತೆರಳಿ ತಮ್ಮ ಮುಡಿ ಕೊಟ್ಟರು. ತಮ್ಮ ಇಡೀ ವೇಷಭೂಷಣವನ್ನೇ ಬದಲಿಸಿದರು. ಅಂಗಿ ಮತ್ತು ಲುಂಗಿ ಧರಿಸಿದರು. ಪೆಚಿಯಮ್ಮಾಳ್ ಹೆಸರು ‘ಮುತ್ತು’ ಎಂದು ಬದಲಾಯಿತು.
“20 ವರ್ಷಗಳ ಹಿಂದೆ ಕಟ್ಟುನಾಯಕನಪಟ್ಟಿಯಲ್ಲಿ ಮರಳಿ ನೆಲೆಯೂರಿದೆವು. ಮನೆಯಲ್ಲಿನ ನನ್ನ ತೀರಾ ಹತ್ತಿರದ ಸಂಬಂಧಿಕರು ಮತ್ತು ನನ್ನ ಮಗಳಿಗೆ ಮಾತ್ರವೇ ನಾನು ಮಹಿಳೆ ಎನ್ನುವುದು ಗೊತ್ತಿತ್ತು” ಎಂದು ಅವರು ಹೇಳಿದ್ದಾರೆ.
ಅಲ್ಲಿಂದ 36 ವರ್ಷ ಗಂಡಿನ ವೇಷದಲ್ಲಿಯೇ ಅವರು ಜೀವನ ಸಾಗಿಸಿದರು. ಅವರು ಕೆಲಸ ಮಾಡಿದ ಕಡೆಯಲ್ಲೆಲ್ಲ ಕಡೆಯೂ ಜನರು ‘ಅಣ್ಣಾಚಿ’ ಎಂದು ಕರೆಯುತ್ತಿದ್ದರು. “ನಾನು ಎಲ್ಲ ರೀತಿಯ ಕೆಲಸಗಳನ್ನೂ ಮಾಡಿದ್ದೇನೆ. ಪೈಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಹೀಗೆ ಎಲ್ಲ ಕೆಲಸಗಳನ್ನೂ ನಿಭಾಯಿಸಿದ್ದೇನೆ. ನನ್ನ ಮಗಳಿಗೆ ಸುರಕ್ಷಿತ ಹಾಗೂ ಸುಭದ್ರ ಜೀವನ ನೀಡುವುದಕ್ಕಾಗಿ ಪ್ರತಿ ಪೈಸೆಯನ್ನೂ ಉಳಿಸಿದ್ದೆ. ಕೆಲವು ದಿನಗಳ ಬಳಿಕ ಮುತ್ತು ಎನ್ನುವುದು ನನ್ನ ಗುರುತಾಗಿ ಬದಲಾಯಿತು. ಆಧಾರ್ ಕಾರ್ಡ್, ವೋಟರ್ ಐಡಿ ಮತ್ತು ಬ್ಯಾಂಕ್ ಖಾತೆಗಳು ಸೇರಿದಂತೆ ಎಲ್ಲ ದಾಖಲೆಗಳಲ್ಲಿಯೂ ‘ಮುತ್ತು’ ಎಂದೇ ಹೆಸರು ನಮೂದಾಗಿದೆ” ಎಂದು ಅವರು ಹೇಳಿದ್ದಾರೆ.
ಪೆಚಿಯಮ್ಮಾಳ್ ಅವರ ಮಗಳು ಷಣ್ಮುಗಸುಂದರಿ ಈಗ ಮದುವೆಯಾಗಿದ್ದಾರೆ. ಆದರೆ 57 ವರ್ಷದ ಪೆಚಿಯಮ್ಮಾಳ್ ತಮ್ಮ ಇದುವರೆಗಿನ ವೇಷವನ್ನು ಮತ್ತೆ ಬದಲಿಸಲು ಸಿದ್ಧರಿಲ್ಲ.
ತಮ್ಮ ಬದಲಿ ಗುರುತು ಇದುವರೆಗೂ ಮಗಳ ಸುರಕ್ಷಿತ ಜೀವನಕ್ಕೆ ಸಹಾಯ ಮಾಡಿದೆ. ಇದೇ ಕಾರಣಕ್ಕಾಗಿ ತಮ್ಮ ಸಾವಿನವರೆಗೂ ‘ಮುತ್ತು’ ಆಗಿಯೇ ಬದುಕಲು ಬಯಸಿರುವುದಾಗಿ ಅವರು ತಿಳಿಸಿದ್ದಾರೆ. ಪೆಚಿಯಾಮ್ಮಾಳ್ ಅವರ ಬಳಿ ಸ್ವಂತ ಮನೆಯಿಲ್ಲ. ಅವರು ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಆದರೆ ನರೇಗಾ ಉದ್ಯೋಗ ಖಾತರಿ ಕಾರ್ಡ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.