ಸುಪ್ರೀಂಕೋರ್ಟ್ ನಕಾರ
ಕಾಶಿ ವಿಶ್ವನಾಥ ದೇವಾಲಯದ ಆವರಣಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯ ವಿಡಿಯೊಗ್ರಫಿ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿರುವ ಬೆನ್ನಲ್ಲೇ, ಶನಿವಾರದಿಂದ ವಿಡಿಯೊ ಸಮೀಕ್ಷೆ ಆರಂಭವಾಗಲಿದೆ ಎಂದು ವಾರಾಣಸಿ ಜಿಲ್ಲಾಡಳಿತ ಘೋಷಿಸಿತ್ತು.
ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿ ದೇಗುಲದಲ್ಲಿ ಪೂಜೆಗೆ ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಿದವರು ಹಾಗೂ ಸಮೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋದ ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿ ಕಡೆಯವರ ಜತೆ ಶುಕ್ರವಾರ ಜಿಲ್ಲಾಡಳಿತವು ಸಭೆ ನಡೆಸಿದ್ದು, ಶಾಂತಿ ಸ್ಥಾಪನೆಗೆ ಸೂಚಿಸಿದೆ. ಅಲ್ಲದೆ, ಸಮೀಕ್ಷೆ ಕುರಿತು ನೀಲನಕ್ಷೆಯನ್ನೂ ತಯಾರಿಸಲಾಗಿದೆ.
”ನ್ಯಾಯಾಲಯದ ಸೂಚನೆಯಂತೆ ಶನಿವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12ವರೆಗೆ ಸಮೀಕ್ಷೆ ನಡೆಯಲಿದೆ. ಸಮೀಕ್ಷೆ ಪ್ರಕ್ರಿಯೆ ಪೂರ್ಣಗೊಳಿಸುವವರೆಗೆ ಎರಡೂ ಕಡೆಯವರು ಶಾಂತಿ ಹಾಗೂ ಸೌಹಾರ್ದತೆ ಕಾಪಾಡಬೇಕು ಎಂದು ಸಭೆ ನಡೆಸಿ ಮನವಿ ಮಾಡಲಾಗಿದೆ,” ಎಂದು ಸಭೆ ಬಳಿಕ ಜಿಲ್ಲಾ ಮ್ಯಾಜಿಸ್ಪ್ರೇಟ್ ಕೌಶಲ್ ರಾಜ್ ಶರ್ಮಾ ತಿಳಿಸಿದ್ದರು.
ಸಮೀಕ್ಷೆಗೆಂದು ವಾರಾಣಸಿ ಕೋರ್ಟ್ ನೇಮಿಸಿರುವ ವಕೀಲ ಅಜಯ್ ಕುಮಾರ್ ಮಿಶ್ರಾ, ಅವರ ನೆರವಿಗಾಗಿ ನೇಮಿಸಲಾದ ಇಬ್ಬರು ವಕೀಲರನ್ನು ಒಳಗೊಂಡ ತಂಡವು ಸಮೀಕ್ಷೆ ನಡೆಸಲಿದೆ. ಮೇ 17 ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ವಾರಾಣಸಿ ನ್ಯಾಯಾಲಯ ನಿರ್ದೇಶಿಸಿದೆ.