ಬಿಎಸ್ಸಿ, ಎಲ್ಎಲ್ಬಿ ಹಾಗೂ ಪಿಜಿಡಿಎಂ ಪದವಿಗಳನ್ನು ಪಡೆದಿರುವ ರಾಜೀವ್ ಕುಮಾರ್ ಜಾರ್ಖಂಡ್ ಕೇಡರ್ನ 1984ನೇ ಬ್ಯಾಚ್ನ ಐಎಎಸ್ ಅಧಿಕಾರಿ. ಅವರು 2020ರ ಸೆಪ್ಟೆಂಬರ್ 1ರಂದು ಭಾರತ ಚುನಾವಣಾ ಆಯೋಗದ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮುನ್ನ ಅವರು ಸಾರ್ವಜನಿಕ ಉದ್ಯಮಗಳ ಮಂಡಳಿ, ಜಾರ್ಖಂಡ್ ಆಡಳಿತಾತ್ಮಕ ಸೇವೆ, ಕೇಂದ್ರ ಹಣಕಾಸು ಸಚಿವಾಲಯದ ಪ್ರಮುಖ ಹುದ್ದೆಗಳಲ್ಲಿಕೆಲಸ ಮಾಡಿದ್ದಾರೆ. ಸಾರ್ವಜನಿಕ ಉದ್ಯಮಗಳ ಆಯ್ಕೆ ಸಮಿತಿ(ಪಿಇಎಸ್ಬಿ) ಯ ಅಧ್ಯಕ್ಷರಾಗಿಯೂ ಗಮನ ಸೇವೆ ಸಲ್ಲಿಸಿದ್ದಾರೆ.
ಸಾಲು ಸಾಲು ಚುನಾವಣೆಯ ಸವಾಲು!
ನೂತನ ಮುಖ್ಯ ಚುನಾವಣಾ ಆಯುಕ್ತರ ಮುಂದೆ ಸಾಲು ಸಾಲು ಚುನಾವಣೆಗಳನ್ನು ನಡೆಸುವ ಸವಾಲು ಇದೆ. ಈ ವರ್ಷಾಂತ್ಯ ಹಾಗೂ ಮುಂಬರುವ ವರ್ಷಗಳಲ್ಲಿ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ, ಜೂನ್ನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಗಳನ್ನು ನಡೆಸುವ ಸವಾಲು ಇದೆ.
ಯಾವ್ಯಾವ ರಾಜ್ಯದ ಚುನಾವಣೆ?
ಇದೇ ವರ್ಷಾಂತ್ಯದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಯ ಚುನಾವಣೆ ಇದ್ದು, 2023ರಲ್ಲಿ ನಾಗಾಲ್ಯಾಂಡ್, ಮೇಘಾಲಯ, ತ್ರಿಪುರ, ಕರ್ನಾಟಕ, ಛತ್ತೀಸ್ಘಡ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ, ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇನ್ನು, 2024ರ ಲೋಕಸಭಾ ಚುನಾವಣೆಯ ನಂತರ ಸಿಕ್ಕಿಂ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ, ದಿಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅವುಗಳೆಲ್ಲವನ್ನೂ ನಿರ್ವಹಿಸುವ ಸವಾಲು ನೂತನ ಚುನಾವಣಾ ಆಯುಕ್ತರಿಗೆ ಇದೆ.